ಆಫ್ ಹ್ಯೂಮನ್ ಬಾಂಡೇಜ್
ಸಾಮರ್‍ಸೆಟ್ ಮಾಂನ ಪ್ರಸಿದ್ಧ ಇಂಗ್ಲಿಷ್ ಕಾದಂಬರಿ. ಮಾಂ ಇದನ್ನು 1889ರಲ್ಲಿ ಬರೆಯಲು ಪ್ರಾರಂಭಿಸಿದ. 1915ರಲ್ಲಿ ಪ್ರಕಟವಾಯಿತು. ಕರ್ತೃವಿನ ಜೀವನವನ್ನೇ ಕಾದಂಬರಿಯ ಕಥೆಯಲ್ಲಿ ಬಹುಮಟ್ಟಿಗೆ ಕಾಣಬಹುದು. ಕಥಾನಾಯಕ ಫಿಲಪ್ ಕುಂಟನಾಗಿ ಹುಟ್ಟಿ ಅನೇಕ ಕಷ್ಟಗಳನ್ನು ಸಹಿಸುತ್ತಾನೆ. ಮಾಂ ಆದರೋ ತನ್ನ ಉಗ್ಗಿನಿಂದ ಕಷ್ಟಪಡುತ್ತಾನೆ. ಫಿಲಪ್ ತನ್ನ ಕುಂಟನ್ನು ಸರಿಪಡಿಸಲೆಂದು ದೇವರನ್ನು ಭಯಭಕ್ತಿಯಿಂದ ಪ್ರಾರ್ಥಿಸುತ್ತಾನೆ. ತನ್ನ ಉಗ್ಗಿನ ಬಗ್ಗೆಯೂ ಮಾಂ ಒಮ್ಮೆ ಹಾಗೆ ಪ್ರಾರ್ಥಿಸಿದ್ದನಂತೆ. 									
(ಎಚ್.ವಿ.ಎಸ್.)

ಈ ಕಾದಂಬರಿಯ ನಾಯಕ ಫಿಲಿಪ್‍ನಿಗೆ ಕ್ಲಬ್‍ಫುಟ್ (ಕಾಲು ದಪ್ಪನಾಗಿದ್ದು ಸರಿಯಾಗಿ ಬೆಳೆಯದಿರುವುದು). ಇದರಿಂದ ಶಾಲೆಯಲ್ಲಿ ಇತರರ ಹಾಸ್ಯಕ್ಕೆ ಗುರಿಯಾಗಿ ಹಿಂಸೆಗೊಳಗಾಗುತ್ತಾನೆ. ಆತನಿಗೆ ತಂದೆ ಇಲ್ಲ, ತಾಯಿ ಇಲ್ಲ, ಕಲಾವಿದನಾಗಲು ಪ್ರಯತ್ನಿಸುತ್ತಾನೆ, ಯಶಸ್ವಿಯಾಗುವುದಿಲ್ಲ, ವೈದ್ಯನಾಗಲು ಓದುತ್ತಿರುವಾಗ ಹೋಟೆಲಿನಲ್ಲಿ ಕೆಲಸಮಾಡುವ ಒಬ್ಬ ಹುಡುಗಿಯಲ್ಲಿ ಅನುರಕ್ತನಾಗಿ, ಪರೀಕ್ಷೆಯಲ್ಲಿ ಅನುತ್ತೀರ್ಣನಾಗುವ ಸ್ಥಿತಿಯಲ್ಲಿರುತ್ತಾನೆ. ಚಿಕ್ಕಪ್ಪನ ನೆರವಿನಿಂದ ವೈದ್ಯನಾಗುತ್ತಾನೆ. ಅವನಿಗೆ ಬೇಡದ ಹುಡುಗಿಯರು ಆತನನ್ನು ಬಯಸಿ ಕಾಟಕೊಡುತ್ತಾರೆ. ಕಡೆಗೆ ಸ್ಕಾಲಿ ಎನ್ನುವ ಹುಡುಗಿಯನ್ನು ಮದುವೆಯಾಗಿ ನೆಮ್ಮದಿಯಾಗಿ ಬಾಳುತ್ತಾನೆ. ಆದರೂ ಅತೀವ ಏಕಾಕಿತನದ ಭಾವ ಕಾಡುತ್ತದೆ, ಮದುವೆಗೆ ಅರ್ಥವಿಲ್ಲ ಎನ್ನಿಸುತ್ತದೆ.

	ಈ ಕಾದಂಬರಿ ಪರೋಕ್ಷ ಆತ್ಮಮಿತ್ರ. ಈ ಕಾದಂಬರಿಯನ್ನು ಬರೆದಿದ್ದರಿಂದ ತನ್ನನ್ನು ಕಾಡುತ್ತಿದ್ದ ನೆನಪುಗಳಿಂದ ಬಿಡುಗೆಡೆಯಾಯಿತು. ಈ ಕಾದಂಬರಿಯ ಬರಹ ತನಗೊಂದು ಚಿಕಿತ್ಸೆಯಾಯಿತು ಎಂದು ಮಾಮ್‍ನೇ ಹೇಳಿದ್ದಾನೆ.	 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ